Untitled Document
Sign Up | Login    
ಕೊರೆವ ದಾರಿಗೆ ತಡೆ ( 4 )

ಚಮೇಲಿ ಈಗ ಹೇಮಂತನಿಗೆ ಬಲು ಹತ್ತಿರದವಳಾಗಿದ್ದಳು. ಆಕೆ ಡಿಸೋಜನ ತಂಡಕ್ಕೆ ಆಹಾರ, ನೀರು ಪೂರೈಸುವವಳು ಎಂದು ತಿಳಿದಾಗ ಹೇಮಂತ ಅವಳ ಅಂತರಂಗವನ್ನು ಅರಿಯಲೆತ್ನಿಸಿ ಕೇಳಿದ್ದ: 'ಚಮೇಲಿ ನೀನು ನನ್ನ ಜೀವ ಉಳಿಸಿದವಳು. ನನಗಾಗಿ ಇನ್ನೂ ನಿನ್ನಿಂದ ಇನ್ನೊಂದು ಸಹಾಯವಾಗಬೇಕಿತ್ತು...'

ಹೇಮಂತನ ಆಕರ್ಷಕ ವ್ಯಕ್ತಿತ್ವಕ್ಕೆ ಎಂದೋ ಮಾರುಹೋದ ಚಮೇಲಿ, 'ಹೇಮಂತಪ್ಪಾರ, ನೀವು ಏನೇ ಹೇಳಿದ್ರೂ ಮಾಡ್ತೀನ್ರಿ. ಪ್ರಾಣ ಕೊಡಬೇಕಂದ್ರೂ ತಯಾರಿದೀನ್ರಿ' ಎಂದು ಆರಾಧನಾ ಭಾವದಿಂದ ಉಲಿದಿದ್ದಳು.

ದೇಶದ್ರೋಹಿ ಮರಗಳ್ಳ ಡಿಸೋಜನ ವಿರುದ್ಧ ತಾನು ಸಹಾಯ ಮಾಡಬೇಕೆಂಬ ಹೇಮಂತನ ಕೋರಿಕೆಯೇ ಅವಳಲ್ಲಿ ರೋಮಾಂಚನ ತಂದಿತ್ತು. ಸುಪ್ತ ಪ್ರತೀಕಾರದ ಕಿಡಿಯನ್ನು ಪ್ರಜ್ವಲಿಸಿತ್ತು. ತನ್ನ ಹಾಗೂ ಡಿಸೋಜನ ಹೊರತಾಗಿ ಇನ್ನಾರಿಗೂ ಗೊತ್ತಿರದ ತನ್ನ ಅಮೂಲ್ಯ ಆಸ್ತಿಯಾದ ಶೀಲವನ್ನು ಕಳೆದುಕೊಂಡ ಆ ದುರ್ದಿನ ಅವಳ ಕಣ್ಣೆದುರಿಗೆ ಕಟ್ಟಿತ್ತು. ರಾಮ್ ಕಿಶನ್ ಬಳ್ಳಾರಿಗೆ ಹೋದ ರಾತ್ರಿ ಡಿಸೋಜ ಬಂದಿದ್ದ. ತನ್ನ ಪ್ರತಿಭಟನೆಯನ್ನೂ ಲೆಕ್ಕಿಸದೆ ಅವಳ ಇಷ್ಟದ ವಿರುದ್ಧವಾಗಿ ಅವಳ ದೇಹವನ್ನು ನಾಯಿ ಮುಟ್ಟಿದ ಮಡಕೆ ಮಾಡಿ ಹೋಗಿದ್ದ. ಉಸಿರೆತ್ತಿದರೆ ಉಸಿರು ಹೋಗುತ್ತದೆ ಎಂದೂ ಎಚ್ಚರಿಸಿದ್ದ. ಆ ಮೇಲೆ ಒಬ್ಬಳೇ ಅವನ ಕೈಗೆ ಸಿಕ್ಕಿರಲಿಲ್ಲವಾದರೂ ಪ್ರತೀಕಾರಕ್ಕಾಗಿ ಕಾಯುತ್ತಿದ್ದಳು. ತಾನಾಗಿ ಒದಗಿ ಬಂದ ಈ ಅವಕಾಶವನ್ನು ಒಂದು ಆಹ್ವಾನವಾಗಿ ಸ್ವೀಕರಿಸಿದಳು.

ಹೇಮಂತನಿಂದ ಫೋಟೊ ತೆಗೆಯುವುದನ್ನು ಕಲಿತುಕೊಂಡ ಚಮೇಲಿ, ಡಿಸೋಜನ ರಹಸ್ಯ ತಾಣಗಳು, ಹುಲಿಯ ಚರ್ಮ, ಗಮಯನ ಕೋಡು, ಬೀಟೆ, ಸಾಗುವಾನಿ ತುಂಡುಗಳ ಫೋಟೊ ತೆಗೆದು ತಂದಳು. ಗುಪ್ತ ದಾರಿಗಳನ್ನೆಲ್ಲ ತಿಳಿಸಿದಳು. ಲಾರಿ ತುಂಬುತ್ತಿದ್ದಾಗಲೂ ಚಾಣಕ್ಷತೆಯಿಂದ ಫೋಟೊತೆಗೆದಳು. ಸಾಕ್ಷ್ಯಾಧಾರಗಳಿಲ್ಲದೇ ಡಿಸೋಜನನ್ನು ಹಿಡಿಯುವುದು ಸಾಧ್ಯವಿಲ್ಲದ್ದರಿಂದ ಇವು ಪ್ರಮುಖ ದಾಖಲೆಯಾಗುತ್ತಿದ್ದವು.

ಎರಡು ದಿನಗಳಿಗೊಮ್ಮೆಯಾದರೂ ಡಿಸೋಜನ ಚಟುವಟಿಕೆಗಳನ್ನು ತಪ್ಪದೇ ವರದಿ ಮಾಡುವ ಚಮೇಲಿಯಿಂದ ಹೇಮಂತ ಬಯಸಿದ ಎಲ್ಲ ರಹಸ್ಯ ಸಂಗತಿಗಳೂ ಕ್ರಮೇಣ ತಿಳಿದುಬಂದವು. ಡಿಸೋಜ ತಪ್ಪಿಸಿಕೊಳ್ಳಬಹುದಾದ ನೆಲೆ, ನುಣುಚಿಕೊಳ್ಳುವ ಹಿನ್ನೆಲೆ, ಲಾರಿ ಬರುವ, ಹೋಗುವ ದಿನ, ಸಮಯಗಳನ್ನೆಲ್ಲ ಸೂಚಿಸುತ್ತಿದ್ದಳು. ಡಿಸೋಜನನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ಆ ದಿನಗಳಿಗಾಗಿ ಕಾಯುತ್ತಿದ್ದಳು.

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : -
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited